ಧ್ವನಿ > ಮುಖ್ಯ ಪುಟ
ಧ್ವನಿ ಟ್ರಸ್ಟ್ - ಬೆಂಗಳೂರು ಇದೊಂದು ಲಾಭ ನಿರಪೇಕ್ಷಿತ ಸಂಸ್ಥೆ. ಶೈಕ್ಷಣಿಕ ಸಂಪನ್ಮೂಲ ಕೇಂದ್ರವಾಗಿ ಇದು ಕಾರ್ಯನಿರ್ವಹಿಸುತ್ತಿದೆ. ಕನ್ನಡ ಮಾಧ್ಯಮ ಶಾಲೆಗಳಲ್ಲಿನ ಕಲಿಕೆ ಮತ್ತು ಬೋಧನೆಯ ಪ್ರಕ್ರಿಯೆಯನ್ನು ಬಲಗೊಳಿಸುವ ದಿಕ್ಕಿನಲ್ಲಿ ಕೆಲಸ ಮಾಡುವುದು ನಮ್ಮ ಮುಖ್ಯ ಉದ್ದೇಶ. ಸದ್ಯ, ಸಮಾಜ ವಿಜ್ಞಾನ ಮತ್ತು ಕನ್ನಡ ವಿಷಯಗಳತ್ತ ನಮ್ಮ ಗಮನ ಕೇಂದ್ರೀಕರಿಸಲಾಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ, ಮಗುವಿನ ಆತ್ಮವಿಶ್ವಾಸ ಪೂರಿತ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ಭಾಷೆ ಮತ್ತು ಮಾನವಿಕ ವಿಷಯಗಳು ತುಂಬ ಮಹತ್ವದ್ದಾಗಿರುತ್ತದೆ. ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳು ಮತ್ತು ಕಲಿಸುತ್ತಿರುವ ಶಿಕ್ಷಕರಿಗೆ ಈ ಎರಡು ವಿಷಯಗಳಿಗೆ ಪೂರಕವಾಗಿರುವ ಉತ್ತಮ ಕಲಿಕಾ ಮತ್ತು ಬೋಧನಾ ಸಾಮಗ್ರಿಗಳ ತೀವ್ರ ಅವಶ್ಯಕತೆ ಇದೆ.

ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರವು ರೂಪಿಸುವ ಸಾಮಗ್ರಿ ಮತ್ತು ವಿಧಾನಗಳು ಮಗುವಿನಲ್ಲಿನ ಸೃಜನಶೀಲ ಶಕ್ತಿಯು ಅರಳಲು ಸಹಾಯಕವಾಗುವ ರೀತಿಯಲ್ಲಿರುತ್ತವೆ. ಮಗುವಿನಲ್ಲಿ ಕಲಿಕೆಯ ಬಗ್ಗೆ ಆಸಕ್ತಿ ಹುಟ್ಟಿ, ಪ್ರೇರಣೆ ಉಂಟಾದಾಗಲೇ ನಿಜವಾದ ಕಲಿಕೆ ಆರಂಭವಾಗುವುದು. ತನ್ನ ಬೋಧನೆಯಲ್ಲಿ ಆನಂದ ಕಾಣುವ, ಸಂತಸ ಅನುಭವಿಸುವ ಶಿಕ್ಷಕ ಮಾತ್ರ ಮಕ್ಕಳ ಕಲಿಕೆಯನ್ನು ಆನಂದಭರಿತವನ್ನಾಗಿ ಮಾಡಬಲ್ಲ ಎಂಬುದು ನಮ್ಮ ಅನುಭವ. ಆದ್ದರಿಂದ, ನಮ್ಮ ಯೋಜನೆಗಳಲ್ಲಿ ಶಿಕ್ಷಕರ ಬಲವರ್ಧನೆಗೇ ಪ್ರಥಮ ಆದ್ಯತೆ ನೀಡಲಾಗಿದೆ. ಈ ವಿಷಯದಲ್ಲಿ ಧ್ವನಿ ಸಂಪನ್ಮೂಲ ಕೇಂದ್ರಕ್ಕೆ ತುಂಬ ಪ್ರೋತ್ಸಾಹದಾಯಕ ಹಿಮ್ಮಾಹಿತಿ ಮತ್ತು ಉತ್ತಮ ಪ್ರತಿಕ್ರಿಯೆಗಳು ಶಿಕ್ಷಕರು ಮತ್ತು ಮಕ್ಕಳಿಬ್ಬರಿಂದಲೂ ಲಭ್ಯವಾಗಿವೆ.

 
  Copyright © 2006. All rights reserved. Designed and maintained by Radius