ಧ್ವನಿ > ಯೋಜನೆಗಳು > ಆರ೦ಭ
ಆರ೦ಭ
ಆರಂಭ ಯೋಜನೆಯು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಅನುಷ್ಠಾನಗೊಳ್ಳಲಿದೆ. ಇದು ೪ ವರ್ಷಗಳ ಅವಧಿಯ ಒಂದು ಯೋಜನೆ. ಇದರ ಮುಖ್ಯ ಗಮನ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಮಕ್ಕಳು. ಈ ಹಂತದಲ್ಲಿ ಪರಿಸರ ಅಧ್ಯಯನ ಮತ್ತು ಕನ್ನಡ ಭಾಷಾ ವಿಷಯಗಳಿಗೆ ಸಂಬಂಧಿಸಿದಂತೆ ಬೋಧನಾ ವಿಧಾನ ಮತ್ತು ಬೋಧನಾ ಸಾಮಗ್ರಿಗಳನ್ನು ಪೂರೈಸುವುದು, ತರಬೇತಿ ನೀಡುವುದು ಈ ಯೋಜನೆ ಮುಖ್ಯ ಉದ್ದೇಶ.

ಯೋಜನೆಯ ವ್ಯಾಪ್ತಿ:

ಸರಕಾರಿ ಹಾಗೂ ಖಾಸಗಿ ಒಡೆತನದ ಒಟ್ಟು ೬ ಶಾಲೆಗಳನ್ನು ಆರಂಭ ಯೋಜನೆಗಾಗಿ ಆಯ್ದುಕೊಳ್ಳಲಾಗಿದೆ. ಇವೆಲ್ಲವೂ ಕನ್ನಡ ಮಾಧ್ಯಮ ಶಾಲೆಗಳು. ಈ ಯೋಜನೆಯು ಸುಮಾರು ೫೦೦ ಮಕ್ಕಳು ಮತ್ತು ಮತ್ತು ೧೨ ಜನ ಶಿಕ್ಷಕರಿಗೆ ಪ್ರಸಕ್ತ ವರ್ಷದಲ್ಲಿ ತಲುಪಲಿದೆ. ಪ್ರತಿವರ್ಷ ಆರಂಭ ಯೋಜನೆಯು ಮುಂದಿನ ತರಗತಿಗಳನ್ನು ಒಳಗೊಳ್ಳುತ್ತ ಮುಂದುವರೆಯುತ್ತದೆ. ಉದಾ: ೨೦೦೭-೦೮ರಲ್ಲಿ ಆರಂಭವು ೧ ಮತ್ತು ೨ ನೇ ತರಗತಿಗಳನ್ನು ಒಳಗೊಳ್ಳುವುದು. ಇದೇ ಕ್ರಮದಲ್ಲಿ ಭವಿಷ್ಯದ ವರ್ಷಗಳಲ್ಲಿ ಯೋಜನೆ ವಿಸ್ತಾರಗೊಳ್ಳುತ್ತ ಹೋಗುವುದು.

ಯೋಜನೆಯ ವಿನ್ಯಾಸ

ಆರಂಭ ಯೋಜನೆಯು ಪೂರಣ ಯೋಜನೆಯ ಸ್ವರೂಪವನ್ನು ಬಹುಮಟ್ಟಿಗೆ ಹೋಲುತ್ತದೆ. ಒಂದೇ ಪ್ರಮುಖ ವ್ಯತ್ಯಾಸವೆಂದರೆ, ಮಕ್ಕಳ ವಯೋಮಾನಕ್ಕೆ ತಕ್ಕಂತೆ ಈ ಯೋಜನೆಯ ವಸ್ತು ಸಾಮಗ್ರಿ ವಿನ್ಯಾಸದಲ್ಲಿ ಬದಲಾವಣೆಗಳು ಇರುತ್ತವೆ. ಇಲ್ಲಿಯೂ ಒಂದು ದಿನದ ತರಬೇತಿ ಶೈಕ್ಷಣಿಕ ವರ್ಷದ ಆರಂಭದಲ್ಲಿದ್ದು, ಕೊನೆಯಲ್ಲಿ ಸಾಮೂಹಿಕ ಹಿಮ್ಮಾಹಿತಿ ಸಭೆ ಇದ್ದೇ ಇರುತ್ತದೆ.

ಸಾಮಗ್ರಿ ಸ್ವರೂಪ:

ಪಠ್ಯಪುಸ್ತಕದಲ್ಲಿ ಸೂಚಿತವಾಗಿರುವ ಹಾಗೂ ಧ್ವನಿಯು ವಿನ್ಯಾಸಗೊಳಿಸಿರುವ ಚಟುವಟಿಕೆಗಳನ್ನು ನಡೆಸಲು ಸಹಾಯಕವಾಗುವ ಸಾಮಗ್ರಿ ಇದರಲ್ಲಿರುತ್ತವೆ. ಮಕ್ಕಳು ಪಾಠದಲ್ಲಿನ ಕಲಿಕಾ ಅಂಶಗಳನ್ನು ಅರ್ಥಮಾಡಿಕೊಂಡು ಅವರ ಮನೋವಿಕಾಸಕ್ಕೆ ಅನುವಾಗುವ ಹಾಗೆ ಇರುತ್ತದೆ. ಅದೇ ವೇಳೆ, ಶಿಕ್ಷಕರು ತಮ್ಮ ವಿಷಯ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಈ ಸಾಮಗ್ರಿ ಸಹಾಯ ಒದಗಿಸುತ್ತದೆ. ಪ್ರತಿ ತಿಂಗಳ ಆರಂಭ ಸಾಮಗ್ರಿಯು ಹೀಗಿರುತ್ತದೆ:
  1. ಸಂಚಿಕೆ
  2. ೩ಡಿ ಮಾದರಿಗಳು- ಮಕ್ಕಳು ವಸ್ತುಗಳನ್ನು ಸ್ವತಃ ಮುಟ್ಟಿ ನೋಡಿ, ಮೂಸಿ ನೋಡಿ, ಒಟ್ಟಾರೆ ಆದಷ್ಟು ಸ್ವಾನುಭವ ಪಡೆಯುವ ಮೂಲಕ ಪಾಠದಲ್ಲಿನ ಕಲಿಕಾಂಶಗಳನ್ನು/ ಸಾಮರ್ಥ್ಯಗಳನ್ನು ಗಳಿಸಿಕೊಳ್ಳುವಂತೆ ಮಾಡಲು ಈ ಬಗೆಯ ಸಾಮಗ್ರಿ ಸಹಾಯಕವಾಗುವುವು.
  3. ವಿವಿಧ ಪ್ರಾಣಿ, ಪಕ್ಷಿಗಳ ಧ್ವನಿಗಳ ಕ್ಯಾಸೆಟ್ ಮತ್ತು ಫೋಟೋ ಸಂಗ್ರಹಗಳು, ಪ್ರಾಸ/ ಶಿಸು ಪದ್ಯಗಳ ಸಂಗ್ರಹ, ಚಟುವಟಿಕೆ ಹಾಗೂ ಆಟಗಳು ಅವುಗಳನ್ನು ನಡೆಸಲು ಬೇಕಾದ ಸಹಾಯಕ/ಪೂರಕ ಸಾಮಗ್ರಿಗಳು ಅಥವಾ ಸೂಚನೆಗಳು/ನಿರ್ದೇಶನಗಳು ಇರುತ್ತವೆ.
ಧ್ವನಿಯು ಇವೆಲ್ಲವನ್ನು ಉಪಯೋಗಿಸುವಲ್ಲಿ ತನ್ನದೇ ವಿಧಾನದ ಬಗ್ಗೆ ಶಿಕ್ಷಕರಿಗೆ ತಿಳಿವಳಿಕೆ ನೀಡುತ್ತದೆ. ಆದಾಗ್ಯೂ, ಅದೇ ವೇಳೆ ಶಿಕ್ಷಕರು ತಮ್ಮ ಅನುಭವ, ಕಲ್ಪನೆ ಮುಂತಾದವುಗಳ ಆಧಾರದ ಮೇಲೆ ಆರಂಭ ಯೋಜನೆಯ ಸಾಮಗ್ರಿ ಬಳಕೆಯ ತಮ್ಮವೇ ಆದ ವಿಧಾನಗಳನ್ನು ಅನುಸರಿಸಲು ಮುಕ್ತರಾಗಿರುತ್ತಾರೆ. 
  Copyright © 2006. All rights reserved. Designed and maintained by Radius