|
|
| ಧ್ವನಿ > ಯೋಜನೆಗಳು > ಪೂರಣ |
ಪೂರಣ
ಇದು ೩ ಮೂರು ವರ್ಷಗಳ ಅವಧಿಯ ಒಂದು ಯೋಜನೆ. ಹಿರಿಯ ಪ್ರಾಥಮಿಕ ಶಾಲಾ ಹಂತದಲ್ಲಿ, ಕನ್ನಡ ಭಾಷೆ ಮತ್ತು ಸಮಾಜವಿಜ್ಞಾನ ವಿಷಯಗಳಿಗೆ ಪೂರಕವಾದ ಉತ್ತಮ ಬೋಧನಾ ಸಾಮಗ್ರಿ ಮತ್ತು ವಿಧಾನಗಳನ್ನು ಒದಗಿಸಿ ಶಿಕ್ಷಕರ ಬಲವರ್ಧನೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶ. ಈ ಯೋಜನೆಯಲ್ಲಿನ ಸಾಮಗ್ರಿ ಮತ್ತು ವಿಧಾನಗಳೆರಡೂ ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯ ಪಠ್ಯಕ್ರಮವನ್ನು ಆಧರಿಸಿದ್ದಾಗಿರುತ್ತವೆ. ಪೂರಣ ಯೋಜನೆಯು ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ಇರುವ ಆಯ್ದ ಸರಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಅನುಷ್ಠಾನ ಗೊಳ್ಳುತ್ತಿದೆ.
ಯೋಜನೆಯ ವ್ಯಾಪ್ತಿ:
೨೦೦೬-೦೭
- ೫, ೬ ಮತ್ತು ೭ನೇ ತರಗತಿಗಳು
- ೨೯ ಶಾಲೆಗಳು
- ೧೦೫ ಜನ ಶಿಕ್ಷಕರು
- ೫೭೦೦ ವಿದ್ಯಾರ್ಥಿಗಳು
|
೨೦೦೫-೦೬
- ೫ ಮತ್ತು ೬ನೇ ತರಗತಿಗಳು
- ೧೭ ಶಾಲೆಗಳು
- ೪೫ ಜನ ಶಿಕ್ಷಕರು
- ೨೧೦೦ ವಿದ್ಯಾರ್ಥಿಗಳು
|
೨೦೦೪-೦೫
- ೫ನೇ ತರಗತಿ
- ೧೨ ಶಾಲೆಗಳು
- ೨೫ ಜನ ಶಿಕ್ಷಕರು
- ೧೦೦೦ ವಿದ್ಯಾರ್ಥಿಗಳು
|
ಯೋಜನೆಯ ವಿನ್ಯಾಸ
ಪೂರಣ ಯೋಜನೆ ಅಡಿ ಆಯ್ಕೆಯಾಗಿರುವ ಶಿಕ್ಷಕರಿಗೆ ೨ ದಿನ ತರಬೇತಿಯನ್ನು ಶೈಕ್ಷಣಿಕ ವರ್ಷದ ಆರಂಭದಲ್ಲಿ ನೀಡಲಾಗುವುದು. ಈ ತರಬೇತಿಯಲ್ಲಿ ಧ್ವನಿ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳು `ಧ್ವನಿ`ಯ ಬೋಧನಾ ವಿಧಾನ ಮತ್ತು ಸಾಮಗ್ರಿಗಳನ್ನು ನಿತ್ಯದ ತರಗತಿಗಳಲ್ಲಿ ಹೇಗೆ ಬಳಸಿಕೊಳ್ಳಬಹುದು ಎಂಬ ಬಗ್ಗೆ ಈ ತರಬೇತಿಯಲ್ಲಿ ಚರ್ಚಿಸುತ್ತಾರೆ. ಯೋಜನೆಯ ಸ್ವರೂಪ, ಅದರಿಂದ ಶಿಕ್ಷಕರು ಏನನ್ನು ಅಪೇಕ್ಷಿಸಬಹುದು ಹಾಗೂ ಯೋಜನೆಯ ಪ್ರತಿಫಲಗಳ ಬಗ್ಗೆಯೂ ಶಿಕ್ಷಕರಿಗೆ ಪೂರ್ವತಿಳಿವಳಿಕೆ ಈ ಸಂದರ್ಭದಲ್ಲಿ ನೀಡಲಾಗುತ್ತದೆ.
ತರಬೇತಿಯ ಬಳಿಕ, ಧ್ವನಿ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳು ಶಾಲೆಗಳಿಗೆ ಪ್ರತಿ ತಿಂಗಳು ಭೇಟಿ ನೀಡುತ್ತಾರೆ. ಈ ಸಮಯದಲ್ಲಿ, ಆಯಾ ತಿಂಗಳ ಪಾಠಯೋಜನೆಗೆ ಪೂರಕವಾಗಿ ರೂಪಿಸಲಾಗಿರುವ ಬೋಧನಾ ಸಾಮಗ್ರಿಗಳ ವಿತರಣೆ ಹಾಗೂ ಅವುಗಳ ಬಗ್ಗೆ ಶಿಕ್ಷಕರಿಗೆ ಹೆಚ್ಚಿನ ತಿಳಿವಳಿಕೆ ನೀಡಲಾಗುವುದು. ಅದೇ ವೇಳೆಯಲ್ಲಿ, ಕಳೆದ ತಿಂಗಳಲ್ಲಿ ಧ್ವನಿ ಸಾಮಗ್ರಿ ಬಳಸಿದ ಕ್ರಮ, ಆಗ ತಮಗಾದ ಅನುಭವ ಹಾಗೂ ತಮ್ಮ ಪರಿವೀಕ್ಷಣೆಗಳು ಮತ್ತು ಮಕ್ಕಳ ಪ್ರತಿಕ್ರಿಯೆ ಇತ್ಯಾದಿಗಳ ಬಗ್ಗೆ ಶಿಕ್ಷಕರಿಂದ ಹಿಮ್ಮಾಹಿತಿ ಪಡೆಯಲಾಗುವುದು. ಶಿಕ್ಷಕರು ಆ ಸಮಯದಲ್ಲಿ ನಿರ್ದಿಷ್ಟ ಸಲಹೆ ಸೂಚನೆಗಳನ್ನು ನೀಡಲು ಅವಕಾಶವಿರುತ್ತದೆ. ಈ ಭೇಟಿಯ ಸಮಯದಲ್ಲಿ ಕೆಲವು ಶಿಕ್ಷಕರು ನಿರ್ದಿಷ್ಟ ಶೈಕ್ಷಣಿಕ ಬೇಡಿಕೆಗಳನ್ನು ಮುಂದಿಡುವುದೂ ಉಂಟು.
ಶೈಕ್ಷಣಿಕ ವರ್ಷದ ಕೊನೆಯಲ್ಲಿ ಒಂದು ವಾರ್ಷಿಕ ಹಿಮ್ಮಾಹಿತಿ ಸಭೆ ಇರುತ್ತದೆ. ಪೂರಣ ಯೋಜನೆಗೆ ಸಂಬಂಧಿಸಿದಂತೆ, ಆ ವರ್ಷದ ಸಮಗ್ರ ನೋಟವನ್ನು ಪಡೆದುಕೊಳ್ಳುವುದು ಮತ್ತು ಬರುವ ವರ್ಷದಲ್ಲಿನ ಕಾರ್ಯಕ್ರಮದ ಬಗ್ಗೆ ಶಿಕ್ಷರಿಂದ ಸಲಹೆ ಸೂಚನೆಗಳನ್ನು ಸ್ವೀಕರಿಸುವುದು ಈ ಸಭೆಯ ಮುಖ್ಯ ಉದ್ದೇಶವಾಗಿರುತ್ತದೆ.
ವರ್ಷದ ಆರಂಭದಲ್ಲಿ ಪೂರಣ ಯೋಜನೆಯ ಮುಖ್ಯೋಪಾಧ್ಯಾಯರುಗಳ ಸಭೆಯನ್ನೂ ಏರ್ಪಡಿಸಲಾಗಿರುತ್ತದೆ.
ಸಾಮಗ್ರಿ ಸ್ವರೂಪ
ಪೂರಣ ಯೋಜನೆಯಡಿ ಸಿದ್ಧವಾದ ಸಾಮಗ್ರಿಗಳು ಹಲವು ವಿಶೇಷತೆಗಳನ್ನು ಹೊಂದಿರುತ್ತವೆ:
- ಅವು, ಪಠ್ಯಪುಸ್ತಕದಲ್ಲಿ ಸೂಚಿತವಾಗಿರುವ ಹಾಗೂ ಧ್ವನಿಯು ವಿನ್ಯಾಸಗೊಳಿಸಿರುವ ಚಟುವಟಿಕೆಗಳನ್ನು ನಡೆಸಲು
ಸಹಾಯಕವಾಗುವಂತಿರುತ್ತವೆ.
- ಮಕ್ಕಳು ಪಾಠದಲ್ಲಿರುವ ಪರಿಕಲ್ಪನೆಗಳನ್ನು ಅರ್ಥಮಾಡಿಕೊಂಡು, ತಮ್ಮ ಮನಸ್ಸು ಮತ್ತು ಬುದ್ಧಿ ವಿಕಾಸ
ಮಾಡಿಕೊಳ್ಳಲು ಅನುವಾಗುವ ರೀತಿಯಲ್ಲಿರುತ್ತವೆ.
- ಶಿಕ್ಷಕರು ತಮ್ಮ ವಿಷಯ ಜ್ಞಾನದ ಆಳವನ್ನು ಹೆಚ್ಚಿಸಿಕೊಳ್ಳಲು ಸಹಾಯ ಒದಗಿಸುತ್ತವೆ.
ಇದಲ್ಲದೇ,
- ಅಧ್ಯಯನ ಸಾಮಗ್ರಿ - ಆಯಾ ತಿಂಗಳಲ್ಲಿ ಮಾಡಬೇಕಿರುವ ಅಧ್ಯಾಯಗಳಿಗೆ ನೇರವಾಗಿ ಸಂಬಂಧಿಸಿದ ಹೆಚ್ಚಿನ ಮಾಹಿತಿ ಇದರಲ್ಲಿದ್ದು, ಇದರಿಂದ ಶಿಕ್ಷಕರ ವಿಷಯ ಜ್ಞಾನದ ಹೆಚ್ಚಳಕ್ಕೆ ಆಸ್ಪದ ಒದಗುತ್ತದೆ.
- ಪ್ರೇರಣಾ ಕಾಗದಗಳು - ಕಲಿಕಾ ಅಂಶಗಳನ್ನು ಅನುಭವದ ಆಧಾರದ ಮೇಲೆ ಕಲಿಯುವಂತೆ ಮಾಡುವ, ಕಲಿಕೆಯಲ್ಲಿ ಸ್ಪೂರ್ತಿಯನ್ನು ತುಂಬುವ ರೀತಿಯಲ್ಲಿ ಯೋಜಿಸಲಾಗಿರುವ ಚಟುವಟಿಕೆ ಕಾಗದಗಳು ಇವು.
- ೩-ಡಿ ಮಾದರಿಗಳು ಇತಿಹಾಸಕ್ಕೆ ಸಂಬಂಧಿಸಿದ ವಸ್ತುಗಳ ಪ್ರತಿಮಾದರಿಗಳು. ಮಕ್ಕಳು ಸ್ವತಃ ಸ್ಪರ್ಷಿಸಿ, ನೋಡಿ, ತಿಳಿಯಲು ಅನುವಾಗುವಂಥವು.
- ಕಿರಿಯರ ಕಣ - ಮಕ್ಕಳ ಅಭಿವ್ಯಕ್ತಿಯ ವೇದಿಕೆಯಾಗಿರುವ ಒಂದು ಮಾಸಿಕ ಭಿತ್ತಿಪತ್ರಿಕೆ
- ಮೇಸ್ಟ್ರ ಕಟ್ಟೆ - ಯೋಜನೆಯಲ್ಲಿ ಭಾಗಿಯಾಗಿರುವ ಶಿಕ್ಷಕರಿಗಾಗಿ ಇರುವ ಮಾಸಿಕ ಪತ್ರಿಕೆ
ಶಿಕ್ಷಕರು ಮತ್ತು ಶಾಲಾ ಮುಖ್ಯೋಪಾಧ್ಯಾಯರುಗಳಿಗೆ ಎಲ್ಲಾ ಮುದ್ರಿತ ಸಾಮಗ್ರಿಯು ತಲುಪುತ್ತದೆ.
ಸಂಚಿಕೆ ಮತ್ತು ಪ್ರೇರಣಾ ಕಾಗದಗಳನ್ನು ೧:೨ ಅನುಪಾತದಲ್ಲಿ ವಿದ್ಯಾರ್ಥಿಗಳಿಗೆ ಕೊಡಲಾಗುತ್ತಿದೆ.
ಇವೆಲ್ಲವೂ ಯೋಜನೆಯಲ್ಲಿ ಭಾಗಿಯಾಗಿರುವ ಎಲ್ಲಾ ಶಾಲೆಗಳ ಶಿಕ್ಷಕರು ಮತ್ತು ಮಕ್ಕಳಿಗೆ ಉಚಿತವಾಗಿ ಕೊಡಲಾಗುತ್ತಿದೆ.
ಧ್ವನಿಯ ಈ ಎಲ್ಲ ಸಾಮಗ್ರಿಗಳನ್ನು ತರಗತಿಗಳಲ್ಲಿ ಉಪಯೋಗಿಸುವ ನಿರ್ದಿಷ್ಟ ವಿಧಾನವನ್ನೂ ಸೂಚಿಸುತ್ತದೆಯಾದರೂ, ಶಿಕ್ಷಕರು ತಮ್ಮ ಅನುಭವ, ಅನುಕೂಲ, ಸಾಮರ್ಥ್ಯಗಳಿಗೆ ಅನುಗುಣವಾಗಿ ತಾವೇ ಈ ವಿಷಯದಲ್ಲಿ ನಿರ್ಧಾರ ಕೈಗೊಳ್ಳಲೂ ಅವಕಾಶವಿರುತ್ತದೆ.
|
|
| |
Copyright © 2006. All rights reserved. Designed and maintained by Radius |