top of page
  • Whatsapp
  • Instagram
  • Facebook

ಕಲಿಯುವುದು ಮನುಷ್ಯನ ಸಹಜ ಗುಣ

Learning is  human nature

English Version is in Development
 

ಪ್ರಧಾನ ಉದ್ದೇಶಗಳು

ಕಲಿಯುವುದು ಮನುಷ್ಯನ ಸಹಜ ಗುಣ. ಕಲಿಕೆಯ ಪ್ರಕ್ರಿಯೆಯಲ್ಲಿನ ಸವಾಲುಗಳ ಬಗ್ಗೆಯೂ ಆತನಿಗೆ ಅದಮ್ಯ ಆಕರ್ಷಣೆ. ಇದನ್ನೆಲ್ಲ ಎದುರಿಸುವಲ್ಲಿ ಆತನಿಗೆ ಸಂತಸ ಸಿಕ್ಕಿದೆ, ಆನಂದ ಉಕ್ಕಿದೆ. ಇದರಿಂದಾಗಿಯೇ ಮನುಷ್ಯನಲ್ಲಿ ಸಹಕಾರ, ಸಹಬಾಳ್ವೆಗಳು ಸಾಧ್ಯವಾಗಿ ಅವುಗಳನ್ನು ಪರಮ ಜೀವನದ ಮೌಲ್ಯವಾಗಿಸಿವೆ ಎಂದು ಜಗತ್ತಿನ ಮಹಾನ್ ಚಿಂತಕರು ಪ್ರತಿಪಾದಿಸಿದ್ದಾರೆ. ಆದಾಗ್ಯೂ, ಅತಿಯಾದ ಸಾಂಸ್ಥೀಕರಣದಿಂದಾಗಿ  ಶಿಕ್ಷಣ ವ್ಯವಸ್ಥೆಯಲ್ಲಿ ಈ ಗುಣಾತ್ಮಕತೆಯ ಬಗೆಗಿನ ಅರಿವು ಕಡಿಮೆಯಾಗಿ ಕಲಿಕೆಯಲ್ಲಿ ಅಸಹಜವೆನಿಸುವ ಒತ್ತಾಯ, ಒತ್ತಡ, ಅನಗತ್ಯ ಮತ್ತು ಅನಾರೋಗ್ಯಪೂರ್ಣ ಸ್ಪರ್ಧೆಗಳು ಏರ್ಪಟ್ಟು ಮನುಷ್ಯರು ಮನುಷ್ಯರೊಂದಿಗೂ, ಪ್ರಕೃತಿಯೊಂದಿಗೂ, ಸ್ವತಃ ತಮ್ಮ ತಮ್ಮ ಜೀವನದೊಂದಿಗೂ ಸಂಘರ್ಷಕ್ಕೆ ಇಳಿದಿರುವುದನ್ನು ಗುರುತಿಸಲಾಗಿದೆ.

ಈ ಅರಿವಿನ ಹಿನ್ನೆಲೆಯಲ್ಲಿ ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರವು ಮನುಷ್ಯನ ಬದುಕಿನಲ್ಲಿ ಮತ್ತೆ ಸಹಕಾರ, ಸಹಬಾಳ್ವೆ, ಸಂತಸ, ಆನಂದಗಳನ್ನು ಶಿಕ್ಷಣದ ಮೂಲಕ ಸಾಧ್ಯವಾಗಿಸಲು ಪ್ರಯತ್ನಿಸುವ ಕಾಳಜಿಯನ್ನು ಹೊಂದಿದೆ. ಈ ಕಾರಣಕ್ಕಾಗಿ ಶಿಕ್ಷಣದಲ್ಲಿ ಮಗುವಿನ ಮಾತು, ಅದರ ಹತ್ತಿರದಲ್ಲಿನ ಪರಿಸರದಲ್ಲಿನ ಭಾಷೆ/ಭಾಷೆಗಳು, ಸುತ್ತಮುತ್ತಲಿನ ಸಾಮಾಜಿಕ ಪರಿಸರ, ಅದರಲ್ಲಿನ ಜೀವನ ಮೌಲ್ಯಗಳು, ಹತ್ತಿರದ ಪ್ರಕೃತಿ, ಸಂಸ್ಕೃತಿಗಳಲ್ಲಿನ ಚಿಂತನೆಗಳಿಗೆ ಆದ್ಯತೆ ನೀಡುವುದು ಸಹಜವಾಗಬೇಕು; ಅದೇ ವೇಳೆ ಮಗುವಿನ ವ್ಯಕ್ತಿತ್ವದ ಸಮಗ್ರ ಬೆಳವಣಿಗೆಯಲ್ಲಿ ಇಡೀ ವಿಶ್ವ ಚೈತನ್ಯ ಮತ್ತು ಸಂಸ್ಕೃತಿಯನ್ನು ತನಗೆ ಸಾಧ್ಯವಿದ್ದಷ್ಟು ಸಹಜವಾಗಿ ಒಳಗೊಳ್ಳುವ ಪ್ರಕ್ರಿಯೆಗೆ ತೆರೆದುಕೊಂಡು, ಮನುಷ್ಯ ಮಗು ವಿಶ್ವಮಾನವನಾಗುವ ದಿವ್ಯ ವಿದ್ಯಮಾನಕ್ಕೆ ಆದ್ಯತೆ ನೀಡುವುದು ಧ್ವನಿ ಸಂಪನ್ಮೂಲ ಕೇಂದ್ರದ ಪ್ರಧಾನ ಉದ್ದೇಶವಾಗಿದೆ.

ಕಾರ್ಯಕ್ರಮಗಳು

  • ಪಠ್ಯಪುಸ್ತಗಳನ್ನು ಅವುಗಳ ಎಲ್ಲ ಮಿತಿಗಳೊಂದಿಗೆ ಒಪ್ಪಿಕೊಂಡೂ, ಅವುಗಳಿಗೆ ಸೀಮಿತಗೊಳ್ಳದೇ ಪಠ್ಯಕ್ರಮದ ಆಶಯ ಆಧಾರಿತ ಪೂರಕ ಸಂಪನ್ಮೂಲಗಳ ಸೃಷ್ಟಿ, ಪ್ರಕಟಣೆ ಮತ್ತು ವಿತರಣೆ ಮಾಡುವುದು

  • ಸೇವಾನಿರತ ಹಾಗೂ ಸೇವಾಪೂರ್ವ ಶಿಕ್ಷಕರಿಗಾಗಿ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸುವುದು

  • ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ನವೀನ ಪ್ರಯೋಗಗಳು, ಸಂಶೋಧನೆಗಳನ್ನು ಮೂಲ ಲೇಖನಗಳ ಬರವಣಿಗೆ ಮತ್ತು ಅನುವಾದಗಳ ಮೂಲಕ ಪರಿಚಯಿಸುವುದು

  • ಸಮಾನ ಮನಸ್ಕ ವ್ಯಕ್ತಿಗಳು ಮತ್ತು ಸಂಸ್ಥೆಗಳೊಂದಿಗೆ ಸಹಕಾರ್ಯಗಳಲ್ಲಿ ತೊಡಗಿಕೊಳ್ಳುವುದು

ಮೇಲಿನ ಮೂರು ಕಾರ್ಯಕ್ರಮಗಳನ್ನು ಧ್ವನಿ ಸಂಪನ್ಮೂಲ ಕೇಂದ್ರವು ಆರಂಭ, ಪೂರಣ, ಚಿತ್ರಣ ಇವೇ ಮುಂತಾದ ಯೋಜನೆಗಳ ಮೂಲಕ ಅನುಷ್ಠಾನಕ್ಕೆ ತರುತ್ತಿದೆ. ಈ ಯೋಜನೆಗಳ ಮೂಲಕ ಸೃಷ್ಟಿಯಾಗುವ ಪಠ್ಯಕ್ರಮ ಪೂರಕ ಸಂಪನ್ಮೂಲಗಳನ್ನು ಆಯಾ ಯೋಜನೆಗಳಲ್ಲಿ ಭಾಗವಹಿಸುತ್ತಿರುವ ಶಿಕ್ಷಕರು, ಮಕ್ಕಳು, ಪಾಲಕರು ಮುಂತಾದವರೊಂದಿಗೆ ಉಚಿತವಾಗಿ ಹಂಚಿಕೊಳ್ಳಲಾಗುತ್ತಿದೆ.

ಬಹುಪಾಲು ಸಂಪನ್ಮೂಲಗಳು ಮುದ್ರಿತ, ಮೂರು ಆಯಾಮ ಜೊತೆಗೆ ವಿವಿಧ ಬಗೆಯ ಡಿಜಿಟಲ್ ರೂಪಗಳಲ್ಲಿ ಸಿದ್ಧಗೊಳ್ಳುತ್ತವೆ. ಮುದ್ರಿತ ಹಾಗೂ ಕೇಳುವ-ನೋಡುವ ಸಂಪನ್ಮೂಲಗಳನ್ನು ಆಸಕ್ತರು ಈ ಬೆಬ್ ಸೈಟ್ ಮೂಲಕವೂ ಪಡೆದುಕೊಳ್ಳಬಹುದು.

bottom of page